ವಿದೇಶಾಂಗ ನೀತಿ
 	ಒಂದು ರಾಷ್ಟ್ರ ತನ್ನ ಉದ್ದೇಶ ಸಾಧನೆಗಾಗಿ ಇತರ ರಾಷ್ಟ್ರಗಳೊಡನೆ ವ್ಯವಹರಿಸಲು ರೂಪಿಸಿಕೊಳ್ಳುವ ನೀತಿ ನಿಯಮಗಳು (ಫಾರಿನ್ ಪಾಲಿಸಿ). ಆಯಾ ದೇಶದ ಅಧಿಕಾರಸ್ಥ ಸರ್ಕಾರ ರೂಪಿಸಿ ಕಾರ್ಯಗತಗೊಳಿಸುವ ಸಾರ್ವಜನಿಕ ನೀತಿಗಳಲ್ಲಿ ವಿದೇಶಾಂಗ ನೀತಿಯೂ ಸೇರಿದೆ. ವಿಜ್ಞಾನ, ತಂತ್ರಜ್ಞಾನ, ಸಾರಿಗೆ-ಸಂಪರ್ಕಗಳಲ್ಲಾದ ಬದಲಾವಣೆಗಳು ಹಾಗೂ ಬೆಳೆವಣಿಗೆಗಳಿಂದ ಮಾನವ ಸಂಬಂಧಗಳು ಈಗ ರಾಷ್ಟ್ರ-ರಾಜ್ಯಗಳ ಗಡಿಗಳನ್ನು ದಾಟಿವೆ. ಯಾವ ರಾಷ್ಟ್ರವೂ ಈಗ ಸ್ವಯಂ ಪರಿಪೂರ್ಣವೆನ್ನುವಂತಿಲ್ಲ. ಹೀಗಾಗಿ ನಿರಂತರವಾಗಿ ಬೆಳೆಯುತ್ತಿರುವ ತಮ್ಮ ದೇಶದ ಅಗತ್ಯಗಳನ್ನು ಪೂರೈಸಿಕೊಳ್ಳಲು ರಾಷ್ಟ್ರಗಳು ಸಂಕೀರ್ಣ ಸ್ವರೂಪದ ಪರಸ್ಪರಾ ವಲಂಬನೆಗೆ ಒಳಗಾಗಿವೆ. ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಬೇಕಾಗಬಹುದಾದ ಸಂಪನ್ಮೂಲಗಳನ್ನು ಈಗ ಅಂತಾರಾಷ್ಟ್ರೀಯ ಸಂಬಂಧಗಳ ಮೂಲಕವೂ ಕ್ರೋಡೀಕರಿಸಿಕೊಳ್ಳ ಬೇಕಾಗಿದೆ. ರಾಷ್ಟ್ರದ ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲೂ ಹೊರರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳೊಡನೆ ಸಂಬಂಧಗಳನ್ನು ನಿರೂಪಿಸಲೂ ನಿಯಂತ್ರಿಸಲೂ ವಿದೇಶಾಂಗ ನೀತಿಯ ಮೂಲಕ ಪ್ರಯತ್ನಿಸಬೇಕಾಗಿದೆ. 

	ವಿದೇಶಾಂಗ ನೀತಿ ಆಯ್ಕೆಯ ಹಿತಾಸಕ್ತಿಗಳನ್ನು ಈಡೇರಿಸುವ ಒಂದು ಸಾಧನ. ಫ್ರೆಡ್ರಿಕ್ ಹಾರ್ಟ್‍ಮನ್‍ನ ಪ್ರಕಾರ ವಿದೇಶಾಂಗ ನೀತಿಯೆಂದರೆ “ಆಯ್ಕೆಯಾದ ಹಿತಾಸಕ್ತಿಗಳನ್ನು ಪೂರ್ವ ಯೋಜಿತವಾಗಿ, ತರ್ಕಬದ್ಧವಾಗಿ, ಸುಸಂಬದ್ಧವಾಗಿ, ವಿಧಿಬದ್ಧಗೊಳಿಸಿ ತದನಂತರ ಕಾರ್ಯಗತಗೊಳಿಸುವ ಹಾಗೂ ವಿಶ್ಲೇಷಣಾತ್ಮಕವಾಗಿ ಪೂರ್ವ ಯೋಜನೆಯಂತೆ ಮುನ್ನಡೆಸುವ ವ್ಯವಸ್ಥೆ”. 
	
ದೇಶವೊಂದರ ಗುರಿಯನ್ನು ಪ್ರತಿಬಿಂಬಿಸುವ ವಿದೇಶಾಂಗ ನೀತಿ ಯಶಸ್ವಿಯಾಗಬೇಕಾದರೆ ಸಂಪರ್ಕಕ್ಕೆ ಬರುವ ದೇಶಗಳ ಸಮುದಾಯ ಮನೋಧೋರಣೆ ಮತ್ತು ಚರ್ಯಾಚರ್ಯೆಗಳಲ್ಲಿ ಬದಲಾವಣೆಗಳುಂಟಾಗು ವಂತೆ ಈ ನೀತಿಯನ್ನು ಜಾರಿಗೊಳಿಸಬೇಕಾಗುತ್ತದೆ. ಇದಕ್ಕಾಗಿ ಮತ್ತೊಂದು ದೇಶದೊಡನೆ ಸಂಧಾನ, ಸಾಮರಸ್ಯ ಮತ್ತು ಹೊಂದಾಣಿಕೆ ಅನಿವಾರ್ಯವಾಗುತ್ತದೆ. ಜಾರ್ಜ್ ಮಾಡಲಸ್ಕಿ ವಿದೇಶಾಂಗ ನೀತಿ ಕುರಿತು “ಬೇರೆ ರಾಜ್ಯಗಳ ವರ್ತನೆಯನ್ನು ಬದಲಿಸುವ ಸಲುವಾಗಿ ಹಾಗೂ ತಮ್ಮ ಚಟುವಟಿಕೆಗಳನ್ನು ಅಂತಾರಾಷ್ಟ್ರೀಯ ಪರಿಸರಕ್ಕೆ ಹೊಂದಿ ಕೊಳ್ಳುವಂತೆ ಸಮುದಾಯಗಳಿಂದ ವಿಕಸಿತಗೊಂಡ ಚಟುವಟಿಕೆಗಳ ವ್ಯವಸ್ಥೆ” ಎಂದು ಹೇಳಿದ್ದಾನೆ. 

	ರಾಷ್ಟ್ರವೊಂದರ ಗಡಿಯಾಚೆಯ ಸಂಬಂಧಗಳ ವ್ಯವಸ್ಥಿತ ನಿರ್ವಹಣೆಗೆ ನೆರವಾಗಬಲ್ಲ ತತ್ತ್ವಾಚರಣೆಗಳು ಹಾಗೂ ಧ್ಯೇಯ ಸಾಧನೆಗಳ ವಿಧಿಬದ್ಧ ಮಾರ್ಗದ ನೀಲಿನಕ್ಷೆಯೇ ವಿದೇಶಾಂಗ ನೀತಿಯಾಗಿದೆ. ಎಲ್ಲ ರಾಷ್ಟ್ರಗಳು ಸಕಾರಾತ್ಮಕವಾಗಿ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳಲೇಬೇಕೆಂಬ ನಿಯಮವೇನಿಲ್ಲ. ಸಂಬಂಧಗಳನ್ನು ಬೆಳೆಸಿಕೊಳ್ಳುವ ಮತ್ತು ಬಿಡುವ ನಿರ್ಧಾರ ಪರಮಾಧಿಕಾರವುಳ್ಳ ಆಯಾ ರಾಷ್ಟ್ರಕ್ಕೆ ಸೇರಿದ್ದು. ಒಟ್ಟಿನಲ್ಲಿ ಹೇಳುವುದಾದರೆ ಸ್ವತಂತ್ರ ರಾಷ್ಟ್ರವೊಂದು ತನ್ನ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಬಾಹ್ಯ ಪರಮಾಧಿಕಾರವನ್ನು ಚಲಾಯಿಸಿ, ರೂಪಿಸುವ ಕಾರ್ಯತಂತ್ರವನ್ನು ವಿದೇಶಾಂಗ ನೀತಿಯೆನ್ನಬಹುದು. 

	ಸ್ವಭಾವತಃ ವಿದೇಶಾಂಗ ನೀತಿ ಆಕ್ರಮಣಕಾರಿ, ವಿಸ್ತರಣಾಶೀಲ, ಮೃದು ಧೋರಣೆಯ, ಪ್ರತ್ಯೇಕತೆಯ, ನಿರ್ಲಿಪ್ತತೆಯ ಅಥವಾ ಅಲಿಪ್ತತೆಯ ನೀತಿಯಾಗಿರಬಹುದು. ಬಾಹ್ಯ ಸಂಬಂಧಗಳನ್ನು ಸೃಷ್ಟಿಸಿ ನಿರ್ವಹಿಸಿಕೊಂಡು ಹೋಗುವಲ್ಲಿ ಸ್ವತಂತ್ರವಾದ ನಿರ್ಣಾಯಕ ಅಧಿಕಾರವನ್ನು ಸರ್ಕಾರ ಚಲಾಯಿಸಬೇಕಾಗಿರುವುದರಿಂದ ಪರಮಾಧಿಕಾರವುಳ್ಳ ಸ್ವತಂತ್ರ ರಾಷ್ಟ್ರಮಾತ್ರ ತನ್ನ ವಿದೇಶಾಂಗ ನೀತಿಯನ್ನು ರೂಪಿಸಿ, ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾಧ್ಯ. 

	ಭಾರತ 1947 ಆಗಸ್ಟ್ 14ರ ಮಧ್ಯರಾತ್ರಿ ಸ್ವತಂತ್ರಗೊಂಡ ಬಳಿಕ ಪ್ರಾಪಂಚಿಕ ವ್ಯವಹಾರಗಳಲ್ಲಿ ಬಾಹ್ಯ ಪರಮಾಧಿಕಾರವನ್ನು ಮತ್ತು ತನ್ನದೇ ಆದ ವಿದೇಶಾಂಗ ನೀತಿಯನ್ನು ಜಾರಿಗೆ ತರಲು ಶಕ್ತವಾಯಿತು. 

	ವಿದೇಶಾಂಗ ನೀತಿ ಅಂತಾರಾಷ್ಟ್ರೀಯ ಸಂಬಂಧಗಳ ಅಡಿಪಾಯ. ಪ್ರಾಪಂಚಿಕ ವ್ಯವಸ್ಥೆಯ ಎಲ್ಲ ಪ್ರಕಾರದ ಚಟುವಟಿಕೆಗಳಿಗೆ ಆಯಾ ರಾಷ್ಟ್ರಗಳ ವಿದೇಶಾಂಗ ನೀತಿಯೇ ಮೂಲ. 

	ವಿದೇಶಾಂಗ ನೀತಿ ರಾಷ್ಟ್ರವೊಂದರ ಆಂತರಿಕ ನೀತಿಯ ವಿಸ್ತøತರೂಪ. ಸರ್ಕಾರಗಳು ವಿದೇಶಾಂಗ ನೀತಿಯ ಮೂಲಕವೂ ದೇಶದ ಆಂತರಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತವೆ. ತತ್ಪರಿಣಾಮವಾಗಿ ಆಂತರಿಕ ನೀತಿ ಮತ್ತು ವಿದೇಶಾಂಗ ನೀತಿ ನಡುವೆ ಇರುವ ಸಂಬಂಧ ಹತ್ತಿರವಾಗುತ್ತಿದೆ. 

	ವಿದೇಶಾಂಗ ನೀತಿ ರಾಜಕೀಯ ಇತಿಹಾಸದಷ್ಟೇ ಪುರಾತನ. ಮಾನವನ ರಾಜಕೀಯ ಪ್ರಬುದ್ಧತೆಯ ಉಷಃಕಾಲದಿಂದಲೂ ಬೆಳೆದು ಬಂದ ರಾಯಭಾರದೊಡನೆಯೇ ವಿದೇಶಾಂಗ ನೀತಿ ಬೆಳೆದುಬಂದಿದೆ. ಪ್ರಾಚೀನ ಭಾರತ, ಚೀನ, ಗ್ರೀಕ್ ಮತ್ತು ರೋಮನ್ ರಾಜಮಹಾರಾಜರು ಯುದ್ಧ, ರಾಯಭಾರ, ವಾಣಿಜ್ಯ ಒಪ್ಪಂದ ಮುಂತಾದವುಗಳ ಮೂಲಕ ವಿದೇಶಾಂಗ ನೀತಿಯನ್ನು ಬೆಳೆಸಿಕೊಂಡು ಬಂದದ್ದುಂಟು. ಆದ್ದರಿಂದಲೇ ಪಾಶ್ಚಾತ್ಯ ರಾಜಕೀಯ ಚಿಂತಕರಾದ ಪ್ಲೇಟೊ, ಅರಿಸ್ಟಾಟಲ್, ಪೊಲಿಬಿಯಸ್, ಸಿಸಿರೋ, ಮೆಕ್ಯಾವೆಲಿ ಇವರ ಚಿಂತನೆ ಹಾಗೂ ಗ್ರಂಥಗಳಲ್ಲಿ, ಪ್ರಾಚೀನ ಭಾರತದ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿ, ರಾಜನೀತಿಜ್ಞರಾದ ಮನು, ಕೌಟಿಲ್ಯರ ಚಿಂತನೆ ಮತ್ತು ಬರೆಹಗಳಲ್ಲಿ ರಾಯಭಾರಿ ಮತ್ತು ರಾಯಭಾರದ ಬಗೆಗಿರುವ ಪ್ರಸ್ತಾಪ ನೇರವಾಗಿ ವಿದೇಶಾಂಗ ನೀತಿಯ ಪ್ರಾಚೀನತೆಗೆ ಸಾಕ್ಷಿಯಾಗಿವೆ. ಬಾಹ್ಯ ವ್ಯವಹಾರಗಳಲ್ಲಿ ರಾಷ್ಟ್ರದ ತತ್ತ್ವಾಚರಣೆಗಳನ್ನು ಜಾರಿಗೊಳಿಸುವುದು, ಪ್ರಾಪಂಚಿಕ ವ್ಯವಸ್ಥೆಯಲ್ಲಿ ತನ್ನ ಅಭಿವೃದ್ಧಿಗೆ ಹೊಂದುವ ಬದಲಾವಣೆಯನ್ನು ತರುವ ಪ್ರಚೋದನಾಂಶವಾಗಿರುವುದು, ಆಂತರಿಕ ಬೆಳೆವಣಿಗೆಗಳಿಗೆ ಮತ್ತು ಬಾಹ್ಯ ಪರಿಸರಕ್ಕೆ ಪ್ರತಿಕ್ರಿಯೆಯಾಗಿರು ವುದು, ಚಲನಾತ್ಮಕವಾಗಿರುವುದು, ಆವಶ್ಯಕತೆಗಳಿಗೆ ಹೊಂದಿಕೊಳ್ಳುವಂತ ಹುದು ಇದರ ಲಕ್ಷಣಗಳಾಗಿವೆ. ರಾಷ್ಟ್ರೀಯ ಹಿತಾಸಕ್ತಿಯ ಸಾಧನವಾಗಿ ಮತ್ತು ರಾಜತಾಂತ್ರಿಕರಿಗೆ ಪವಿತ್ರ ಮಾರ್ಗದರ್ಶಿಯಾಗಿರುವ ವಿದೇಶಾಂಗ ನೀತಿ ಪ್ರಭಾವೀ ವೈವಿಧ್ಯಮಯ ಕ್ಷೇತ್ರವನ್ನು ಹೊಂದಿದೆ. 

	ರಾಷ್ಟ್ರ ಭದ್ರತೆ, ರಾಷ್ಟ್ರಾಭಿವೃದ್ಧಿ, ಜನಕಲ್ಯಾಣ, ರಾಷ್ಟ್ರ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವ ಶಾಂತಿಯುತ ಪ್ರಾಪಂಚಿಕ ವ್ಯವಸ್ಥೆ ಇವು ವಿದೇಶಾಂಗ ನೀತಿಯ ಕೆಲವು ಗುರಿಗಳೆನ್ನಬಹುದು. ರಾಷ್ಟ್ರೀಯ ಹಿತಾಸಕ್ತಿಯ ರೂಪದಲ್ಲಿರುವ ಇಂತಹ ಗುರಿಗಳನ್ನು ಸಂರಕ್ಷಿಸಿ ಈಡೇರಿಸಿಕೊಳ್ಳಲು ನಿರ್ಮಾಣಗೊಳ್ಳುವ ವಿದೇಶಾಂಗ ನೀತಿ ವಾಸ್ತವಿಕತೆಗೆ ಸ್ಪಂದಿಸುವಂತಿರ ಬೇಕು. ರಾಷ್ಟ್ರೀಯ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳಲು ನೆರವಾಗಬಲ್ಲ ಎಲ್ಲ ಆಂತರಿಕ ಮತ್ತು ಅಂತಾರಾಷ್ಟ್ರೀಯ ಶಕ್ತಿ ಸಾಮಥ್ರ್ಯಗಳ ವಿಶ್ಲೇಷಣಾ ತ್ಮಕ ಹಾಗೂ ಆನ್ವಯಿಕ ಪರಿಜ್ಞಾನ, ವಿದೇಶಾಂಗ ನೀತಿ ನಿರ್ವಾಹಕರಲ್ಲಿ ಇದ್ದಾಗ ಅದು ಫಲಪ್ರದವಾಗುತ್ತದೆ. 

	ಆಯಾದೇಶಗಳ ಭೌಗೋಳಿಕ ಅಂಶ, ಐತಿಹಾಸಿಕ ಪರಂಪರೆ, ನೈಸರ್ಗಿಕ ಸಂಪನ್ಮೂಲಗಳು, ಕೈಗಾರಿಕಾಭಿವೃದ್ಧಿ, ಸೈನಿಕಶಕ್ತಿ, ಜನಸಂಖ್ಯೆ, ರಾಷ್ಟ್ರದ ಸಾಂಸ್ಥಿಕ ಮತ್ತು ವ್ಯಕ್ತಿತ್ವ ಪ್ರಭಾವ, ರಾಷ್ಟ್ರದ ಸಿದ್ಧಾಂತ ಮತ್ತು ಆದರ್ಶಗಳು, ರಾಷ್ಟ್ರೀಯ ಹಿತಾಸಕ್ತಿ ಮತ್ತು ಅಂತಾರಾಷ್ಟ್ರೀಯ ಸಂಬಂಧ ಇತ್ಯಾದಿಗಳನ್ನು ಒಂದು ರಾಷ್ಟ್ರದ ವಿದೇಶಾಂಗ ನೀತಿಯನ್ನು ರೂಪಿಸಿ ನಡೆಸುವ ನಿರ್ಧಾರಕ ಅಂಶಗಳೆಂದು ಹೇಳಬಹುದು. ವಿದೇಶಾಂಗ ನೀತಿ ಸಫಲವಾಗಬೇಕಾದರೆ ಈ ಅಂಶಗಳು ಸಕಾರಾತ್ಮಕವೂ ಪೂರಕವೂ ಆಗಿರಬೇಕು. 

	ವಿದೇಶಾಂಗ ನೀತಿಯ ಕೆಲವು ಸಾಧನಗಳಿಂತಿವೆ-ರಾಯಭಾರ, ಯುದ್ಧ, ಶಕ್ತಿ ಸಮತೋಲನ, ಪ್ರಚಾರ (ಅಪಪ್ರಚಾರ ಮತ್ತು ಪ್ರತಿಪ್ರಚಾರ), ಅಂತಾರಾಷ್ಟ್ರೀಯ ಸಂಘಟನೆ, ಬುಡಮೇಲು ನೀತಿ, ಶಸ್ತ್ರಾಸ್ತ್ರ ಪೈಪೋಟಿ ಮತ್ತು ನಿಶ್ಶಸ್ತ್ರೀಕರಣ. ಪರಮಾಧಿಕಾರವುಳ್ಳ ರಾಷ್ಟ್ರಗಳ ಸಂಬಂಧಗಳಲ್ಲಿ ಈ ಸಾಧನಗಳ ಬಳಕೆ ಸ್ಪರ್ಧಾತ್ಮಕ. ಈ ಸಾಧನಗಳನ್ನು ಬಳಸಿ, ಬಲಾಬಲಗಳನ್ನು ಅಳೆದು ಸಮಯೋಚಿತವಾಗಿ ಮುನ್ನಡೆದು ವಿದೇಶಾಂಗ ನೀತಿಯ ಸಾಫಲ್ಯ ಪಡೆಯಬೇಕಾಗುತ್ತದೆ. 

	ವಿದೇಶಾಂಗ ನೀತಿಯ ಕಾರ್ಯಗಳು : ವಿಶಿಷ್ಟ ಪ್ರಕ್ರಿಯೆಯಾಗಿರುವ ವಿದೇಶಾಂಗ ನೀತಿ ನಿರ್ವಹಿಸುವ ಕಾರ್ಯಗಳನ್ನು ಅವಲೋಕಿಸಿದರೆ  ಅದರ ಮಹತ್ತ್ವದ ಅರಿವಾಗುತ್ತದೆ. ಅಂತಾರಾಷ್ಟ್ರೀಯ ಜೀವನದ ಮುಖ್ಯ ವಾಹಿನಿಯಲ್ಲಿ ಒಂದು ದೇಶವನ್ನು ತಂದು, ಅದರ ಪಾಲ್ಗೊಳ್ಳು ವಿಕೆಗೆ ವಿಧಿಬದ್ಧತೆಯನ್ನು ತಂದುಕೊಡುವುದು ಈ ನೀತಿಯ ಪ್ರಥಮ ಕಾರ್ಯ. ರಾಷ್ಟ್ರೀಯ ಹಿತಾಸಕ್ತಿಯ ಈಡೇರಿಕೆಗಾಗಿ ಅಂತಾರಾಷ್ಟ್ರೀಯ ಬಾಂಧವ್ಯವನ್ನು ಬೆಳೆಸುವುದು, ಅಡ್ಡಬರುವ ದುಷ್ಟಶಕ್ತಿಗಳನ್ನು ನಿಗ್ರಹಿಸು ವುದು ಈ ನೀತಿಯ ಮತ್ತೊಂದು ಕಾರ್ಯ. ರಾಷ್ಟ್ರೀಯ ಹಿತಾಸಕ್ತಿಗೆ ಅಪಚಾರವಾಗದಂತೆ ಬದಲಾಗುವ ಆಂತರಿಕ ಮತ್ತು ಅಂತಾರಾಷ್ಟ್ರೀಯ ಪರಿಸರ ಮತ್ತು ಪರಿಸ್ಥಿತಿಗೆ ತಕ್ಕಂತೆ ಪ್ರಾಪಂಚಿಕ ಹಿತಾಸಕ್ತಿಯ ಈಡೇರಿಕೆಗೂ ನಿರ್ವಹಣೆಯಲ್ಲಿ ಮಾರ್ಪಾಟನ್ನುಂಟು ಮಾಡುವುದು ಈ ನೀತಿಯ ಇನ್ನೊಂದು ಕಾರ್ಯ. 

	ಎಲ್ಲಕ್ಕಿಂತಲೂ ಮಿಗಿಲಾಗಿ ರಾಷ್ಟ್ರೀಯ ಹಿತಾಸಕ್ತಿಯ ಈಡೇರಿಕೆಗಾಗಿ, ರಾಷ್ಟ್ರದ ಬಾಹ್ಯ ಸಂಬಂಧಗಳ ವ್ಯವಸ್ಥಿತ ಸಂಘಟನೆ ಮತ್ತು ನಿರ್ವಹಣೆಗೆ ಈ ನೀತಿ ಪರಮೋಚ್ಚ ಸಾಧನವಾಗಿದೆ. 

	ಭವಿಷ್ಯದಲ್ಲಿ ಪ್ರಪಂಚದ ಎಲ್ಲ ರಾಷ್ಟ್ರಗಳು ಒಂದಾಗಿ ಏಕಸರ್ಕಾರ ಮತ್ತು ನೀತಿಯ ಜಾರಿಗೆ ಮುಂದಾದರೆ ಈ ನೀತಿಯ ಆವಶ್ಯಕತೆ ಕಡಮೆಯಾಗಬಹುದು ಅಥವಾ ಬೇಡದಂತೆಯೇ ಆಗಬಹುದು. ಆದರೆ ಈಗಿನ ಪರಿಸ್ಥಿತಿಯಲ್ಲಿ ಪ್ರಬಲ ರಾಷ್ಟ್ರಗಳ ಯಜಮಾನಿಕೆಯಿಂದ ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ಮತ್ತು ಬಹುರಾಷ್ಟ್ರೀಯ ನಿಗಮಗಳ ಪ್ರಭಾವದಿಂದ ರಾಷ್ಟ್ರಗಳು ಆರ್ಥಿಕ ಒಕ್ಕೂಟ ಪ್ರಕ್ರಿಯೆಯಲ್ಲಿ ತೊಡಗುತ್ತಿವೆ. ಆರ್ಥಿಕ ಒಕ್ಕೂಟ ಮತ್ತು ರಾಜಕೀಯ ಒಗ್ಗೂಡಿಕೆಗಳ ನಡುವೆ ದ್ವಂದ್ವವಿದೆ. ಆರ್ಥಿಕ ಏಕೀಕರಣ ರಾಷ್ಟ್ರಗಳ ಎಲ್ಲೆಗಳನ್ನು ಅಳಿಸಿ ಪರಮಾಧಿಕಾರವನ್ನು ಸಂಕುಚಿತಗೊಳಿಸುವ ಪ್ರಕ್ರಿಯೆಯಾದರೆ ರಾಷ್ಟ್ರಗಳ ಅಸ್ತಿತ್ವಕ್ಕೆ ಧಕ್ಕೆಯುಂಟಾಗಬಹುದು. ಆದರೆ ಯಾವುದೇ ರಾಷ್ಟ್ರ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿಚ್ಛಿಸುವುದಿಲ್ಲ. ಹೀಗಾಗಿ ತಮ್ಮ ಪರಮಾಧಿಕಾರ ಉಳಿಸಿಕೊಳ್ಳಲು ಜಾಗತೀಕರಣದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು, ಸ್ಪರ್ಧಾತ್ಮಕವಾಗಿ ಅವಕಾಶಗಳನ್ನು ಪಡೆಯಲು ಚತುರತೆಯಿಂದ ಈ ನೀತಿಯನ್ನು ಬಳಸಬೇಕಾಗುತ್ತದೆ. 

	ಭಾರತದ ವಿದೇಶಾಂಗ ನೀತಿ : ಎರಡನೆಯ ಮಹಾಯುದ್ಧದ ಅನಂತರ ಏಷ್ಯ, ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕಗಳ ವಸಾಹತುಗಳ ವಿಮೋಚನೆಯ ಪರಿಣಾಮವಾಗಿ ಉದಯಿಸಿದ ಸ್ವತಂತ್ರ ರಾಷ್ಟ್ರಗಳಲ್ಲಿ ಭಾರತ ಮುಖ್ಯವಾದದ್ದು. 1947ರ ಆಗಸ್ಟ್ 14ರಂದು ಅಧಿಕಾರ ಪಡೆದ ಮೇಲೆ ಭಾರತ ತನ್ನದೇ ಆದ ವಿದೇಶಾಂಗ ನೀತಿಯನ್ನು ಅನುಸರಿಸಿ ಸಾಕಷ್ಟು ಸಫಲತೆಯನ್ನು ಸಾಧಿಸಿದೆ. 

	ಪ್ರಪಂಚದಲ್ಲಿ ಏಳನೆಯ ಮತ್ತು ದಕ್ಷಿಣ ಏಷ್ಯದಲ್ಲಿ ಮೊದಲನೆಯ ಭೌಗೋಳಿಕ ವಿಸ್ತಾರವುಳ್ಳ ರಾಷ್ಟ್ರವಾಗಿರುವ ಭಾರತ ಗೌತಮ ಬುದ್ಧ, ಸಾಮ್ರಾಟ ಅಶೋಕ, ಕೌಟಿಲ್ಯ, ಮಹಾತ್ಮಗಾಂಧೀ, ಜವಹರಲಾಲ ನೆಹರೂ ಹಾಗೂ ರಕ್ಷಣಾ ಸಚಿವರಾಗಿದ್ದ ಕೃಷ್ಣಮೆನನ್‍ರಂತಹ ಪ್ರತಿಭಾವಂತರು ತೋರಿದ ತತ್ತ್ವಾದರ್ಶಗಳಿಂದ ವಿದೇಶಾಂಗ ನೀತಿ ರೂಪಿಸಿಕೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 1885 ಅಕ್ಟೋಬರ್ 10ರಂದು ಅಸ್ತಿತ್ವಕ್ಕೆ ಬಂದ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಅಧಿವೇಶನ ಅಂಗೀಕರಿಸಿದ ಗೊತ್ತುವಳಿಗಳು, ಗಾಂಧೀ ಮುಂತಾದವರ ಭಾಷಣಗಳು  ಧುರೀಣರು ವ್ಯಕ್ತಪಡಿಸಿದ ಅಭಿಪ್ರಾಯಗಳು, ಕೈಗೊಂಡ ಕ್ರಮಗಳು ಭಾರತದ ವಿದೇಶಾಂಗ ನೀತಿಯ ರಚನೆಯಲ್ಲಿ ಪ್ರಭಾವ ಬೀರಿವೆ. ಅಲಿಪ್ತ ನೀತಿ, ಪಂಚಶೀಲ ತತ್ತ್ವ, ಬಹುತ್ವವಾದ, ಪ್ರಜಾಪ್ರಭುತ್ವ, ಅಂತಾರಾಷ್ಟ್ರೀಯ ಸ್ವಾತಂತ್ರ್ಯ, ಸಮಾನತೆ, ಸ್ನೇಹ, ಭದ್ರತೆ, ಶಾಂತಿ, ಸೌಹಾರ್ದತೆಗಳ ಸ್ಥಾಪನೆ, ವಸಾಹತು, ಸಾಮ್ರಾಜ್ಯಶಾಹಿತ್ವ ಹಾಗೂ ವರ್ಣಭೇದ ನೀತಿಗೆ ವಿರೋಧ ಮುಂತಾದವು ಭಾರತದ ವಿದೇಶಾಂಗ ನೀತಿಯ ಸೂತ್ರಗಳಾಗಿವೆ. 

	1950 ಜನವರಿ 26ರಂದು ಜಾರಿಗೊಂಡ ಭಾರತದ ಸಂವಿಧಾನದ 51ನೆಯ ವಿಧಿಯಲ್ಲಿ ರಾಷ್ಟ್ರಗಳು ಪರಸ್ಪರ ಭೂ ಸಮಗ್ರತೆಯನ್ನು ಮತ್ತು ಪರಮಾಧಿಕಾರವನ್ನು ಗೌರವಿಸುವುದು; ಪರಸ್ಪರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು; ಪರಸ್ಪರರ ಮೇಲೆ ಆಕ್ರಮಣ ಮಾಡದೇ ಇರುವುದು; ಪರಸ್ಪರರ ಹಿತವನ್ನು ಗೌರವಿಸುತ್ತ ಶಾಂತಿಯುತ ಸಹಬಾಳ್ವೆ ನಡೆಸುವುದು ಎಂಬ ಭಾರತದ ವಿದೇಶಾಂಗ ನೀತಿಯ ಪ್ರಧಾನ ತತ್ತ್ವಗಳನ್ನು ಸೂಚಿಸಲಾಗಿದೆ.

	ಪಾಕ್ ಪ್ರಚೋದಿತ ಯುದ್ಧಗಳಲ್ಲಿ ಭಾರತಕ್ಕೆ ಜಯ, ಗೋವ ವಿಮೋಚನೆ, ಬಾಂಗ್ಲಾದೇಶದ ಸ್ವಾತಂತ್ರ್ಯ, ಜನಾಂಗೀಯ ಭಯೋತ್ಪಾದನೆ ಯನ್ನು ಎದುರಿಸಲು ಶ್ರೀಲಂಕಾಕ್ಕೆ ನೀಡಿದ ನೆರವು, ವರ್ಣಭೇದ ನೀತಿಯ ವಿರುದ್ಧ ಯಶಗೊಳ್ಳಲು ದಕ್ಷಿಣ ಆಫ್ರಿಕ ಮತ್ತು ಆಫ್ರಿಕದ ಮತ್ತಿತರ ರಾಷ್ಟ್ರಗಳಿಗೆ ನೀಡಿದ ಬೆಂಬಲ, 1971ರಲ್ಲಿ ಸೋವಿಯತ್ ಒಕ್ಕೂಟದೊಡನೆ ಮಾಡಿಕೊಂಡ ಒಪ್ಪಂದ, ಶೀತಲ ಸಮರೋತ್ತರ ಕಾಲದಲ್ಲಿ ಬದಲಾದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಸರಕ್ಕೆ ತಕ್ಕಂತೆ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳೊ ಡನೆ ನಿಕಟತೆಯನ್ನು ಸಾಧಿಸಲು ವಿದೇಶಾಂಗ ನೀತಿಯನ್ನು ಮಾರ್ಪಡಿಸಿ ಕೊಂಡಿರುವುದು, ವಿವಿಧ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಒಪ್ಪಂದ ಗಳನ್ನು ಮಾಡಿಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದ ಸಂಪನ್ಮೂಲಗಳನ್ನು ವಿವಿಧ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳಿಂದ ಪಡೆದುಕೊಂಡಿರುವುದು, ಪ್ರಾದೇಶಿಕ ಮತ್ತು ಪ್ರಾಪಂಚಿಕ ಸಂಘಟನೆಗಳಲ್ಲಿ ಸದಸ್ಯತ್ವವನ್ನು ಪಡೆದು ಪ್ರಾದೇಶಿಕ ಮತ್ತು ಪ್ರಾಪಂಚಿಕ ಸಮಸ್ಯೆಗಳ ಪರಿಹಾರಕ್ಕೆ ಸಕ್ರಿಯವಾಗಿ ಪ್ರಯತ್ನಿಸುತ್ತಿ ರುವುದು, ಎಲ್ಲಕ್ಕಿಂತಲೂ ಮಿಗಿಲಾಗಿ ಪಂಚಶೀಲ ಮತ್ತು ಅಲಿಪ್ತನೀತಿಯ ತತ್ತ್ವಗಳಿಗೆ ಮಾನ್ಯತೆ ಪ್ರಾಪ್ತವಾಗುವಂತೆ ಮಾಡಿರುವುದು, ವಿಶ್ವಸಂಸ್ಥೆ ಯಲ್ಲಿ ಮತ್ತು ಪ್ರಾಪಂಚಿಕ ವ್ಯವಸ್ಥೆಗಳಲ್ಲಿ ಪ್ರಜಾತಂತ್ರೀಕರಣಕ್ಕೆ ಪ್ರಯತ್ನಿಸು ತ್ತಿರುವುದು, ಪ್ರಾಪಂಚಿಕ ಶಾಂತಿ ಮತ್ತು ಭದ್ರತೆಗಾಗಿ ಭಯೋತ್ಪಾದನೆ ಮತ್ತು ಪರಮಾಣು ಶಸ್ತ್ರಾಸ್ತ್ರ ಪೈಪೋಟಿಯ ವಿರುದ್ಧ ನಿರಂತರವಾಗಿ ಧ್ವನಿಯೆತ್ತಿ ರಾಷ್ಟ್ರಗಳನ್ನು ಜಾಗೃತಗೊಳಿಸುತ್ತಿರುವುದು ಭಾರತದ ವಿದೇ ಶಾಂಗ ನೀತಿಯ ಪ್ರಮುಖ ವಿಷಯಗಳಾಗಿವೆ. ಪಾಕ್ ಪ್ರಚೋದಿತ ಭಯೋತ್ಪಾದನೆ, ಪಾಕ್ ಆಕ್ರಮಿತ ಕಾಶ್ಮೀರ, ಚೀನ ಆಕ್ರಮಿತ ಭಾರತದ ಭೂ ಪ್ರದೇಶಗಳಿಂದ ಉದ್ಭವಿಸಿದ ಸಮಸ್ಯೆಗಳು ಭಾರತದ ವಿದೇಶಾಂಗ ನೀತಿಗೆ ಸವಾಲುಗಳಾಗಿವೆ.										
	(ಕೆ.ಎಚ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ